Wednesday, 25 February 2015

೩. ಬಂಗಾರದ ಹೂಗಳ ಮರ್ಮ

ಗೋರ್ಕಲ್ಲ ಬಳಿ ಒಂಟಿಯಾಗಿ ಹೊರಟ ಟೋನಿ, ಬಂಗಾರ ವರ್ಣದ ಹೂಗಳನ್ನು ಕೊಯ್ಯುವುದರಲ್ಲಿ ಮಗ್ನನಾಗುತ್ತಾನೆ. ಅಚಾನಕ್ ಆಗಿ ಬಂದ ಸರ್ಪಗಳಿಂದ ಹಾಗೂ ವ್ಯಕ್ತಿಯಿಂದ ಬೆಚ್ಚಿಬಿದ್ದ ಟೋನಿಯನ್ನು ಆ ವ್ಯಕ್ತಿ ಮಾತನಾಡಿಸುತ್ತಾನೆ. 

--- ೩. ಬಂಗಾರದ ಹೂಗಳ ಮರ್ಮ

ಗ್ಲಾಸ್ ಕಂಟೇನರ್ನಲ್ಲಿ ತುಂಬಿದ ಹೂಗಳನ್ನು ನೋಡುತ್ತ ಮುಗುಳ್ನಕ್ಕ ಶರ್ಮ. 

ಇಸ್ಟೆಲ್ಲಾ ಹೂಗಳನ್ನ ಏನು ಮಾಡ್ತೀಯ? ಡಾಕ್ಟರ್ರಾ ?

ಇಲ್ಲ, ಇಲ್ಲ. ನಾನೊಬ್ಬ ಸಂಶೋದಕ. ಈ ಹೂಗಳನ್ನು ಸ್ಟಡಿ ಮಾಡಿ ಇದರ ಉಪಯೋಗಗಳನ್ನು ಕಂಡುಹಿಡಿದು..., ಮಾತು ನಿಲ್ಲಿಸಿದ ಟೋನಿ. 

ಮತ್ತದೇ ಸರ ಸರ ಸದ್ದು..  ಆ ಹಾವುಗಳು ಪುನಃ ಬರುತ್ತಿವೆ! 

ಶರ್ಮ, ಟೋನಿಯನ್ನು ಪಕ್ಕಕ್ಕೆ ಎಳೆದ, ಟೋನಿಯ ಬ್ಯಾಗ್ ಮತ್ತು ಹೂಗಳು ತುಂಬಿದ ಕಂಟೇನರ್ ಅಲ್ಲೇ ಬಿಡಲು ಹೇಳಿ ಗೋರ್ಕಲ್ಲ ಮತ್ತೊಂದು ಕಡೆ ನಡೆಯಲು ಹೇಳಿದ. ಶರ್ಮ ತನ್ನ ಬಳಿಯಿದ್ದ ದೊಣ್ಣೆಯಿಂದ ಅಲ್ಲಿನ ಪೊದೆಗಳನ್ನು ಸರಿಸುತ್ತ ಜಾಗ ಮಾಡುತ್ತ ದಾರಿ ಮಾಡುತ್ತಿದ್ದರೆ ಟೋನಿ ಅವರನ್ನ ಹಿಂಬಾಲಿಸುತ್ತಿದ್ದ. 

ಗೋರ್ಕಲ್ಲ  ಹಿಂದೆ ಅವರಿಬ್ಬರೂ ತಲುಪಿದರು! ಅಲ್ಲಿ ಸುಮಾರು ೨೦ ಅಡಿ ಅಗಲದ, ೨೦ ಅಡಿ ಆಳದ ಗುಂಡಿ! 
ಅದರ ಪಕ್ಕದಲ್ಲಿ ಕುಳಿತುಕೊಳ್ಳಲು ಜಾಗ ಇತ್ತು. ಟೋನಿಗೆ ಕುಳಿತುಕೊಳ್ಳಲು ಹೇಳಿದ ಶರ್ಮ ತಾನೂ ಕುಳಿತ. 

ಆ ಹೂಗಳ ವಿಶೇಷತೆ ಏನು ಗೊತ್ತೆ ?, ಟೋನಿಯನ್ನು ಕೇಳಿದ ಶರ್ಮ. 

ಇಲ್ಲ, ಆದರೆ ಇದು ವರ್ಷದ ಈ ತಿಂಗಳಲ್ಲಿ ಮಾತ್ರ ಬಿಡುತ್ತದೆ. ಮತ್ತು ಕೊಯ್ದ ನಂತರ ಸುಮಾರು ೮ ರಿಂದ ೧೦ ದಿನ ಬಾಡುವುದಿಲ್ಲ ಎನ್ನೋದು ಮಾತ್ರ ಗೊತ್ತು. 

ಸರಿಯಾಗಿ ಹೇಳಿದೆ ಜಗದೀಶ್. ಅದರ ಜೊತೆಗೆ ಇದರ ವೈದ್ಯಕೀಯ ಗುಣಗಳನ್ನು ಹೇಳುತ್ತೇನೆ ಕೇಳು. 

ನೀವು ವೈದ್ಯರೇ?

ಹೌದು. ನಾನು ಈ ಸುತ್ತಮುತ್ತಲಿನ ಗ್ರಾಮಗಳಿಗೆ ಇರುವ ಒಬ್ಬನೇ ನಾಟಿ ವೈದ್ಯ. 

ಟೋನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ತಿಳಿಯುವ ಕುತೂಹಲದಿಂದ ಟೋನಿಯ ಕಣ್ಣುಗಳು ಅರಳಿದ್ದನ್ನು ಗಮನಿಸಿದ ಶರ್ಮ ಮುಂದುವರೆಸಿದ. 

---

ಈ ಹೂಗಳು ನೀನು ಹೇಳಿದಂತೆ ಕೊಯ್ದ ನಂತರ ೧೦ ದಿನ ಬಾಡದೆ ಹಾಗೆ ಇರುತ್ತದೆ. ಆದರೆ ಬಾಡುವ ಹತ್ತನೇ ದಿನ, ಅಥವಾ ಬಾಡುವ ಮುನ್ನಾ ದಿನ ಬಂಗಾರ ವರ್ಣದಿಂದ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆಗ ಐದು ಹೂವನ್ನು ಒಂದು ಲೋಟ ಹಾಲಿನಲ್ಲಿ ಬೇಯಿಸಿ ಜೇನುತುಪ್ಪದೊಡನೆ  ಸೇವಿಸಿದರೆ ಸುಮಾರು ೧೫ ದಿನ ಸುಸ್ತೇ ಆಗುವುದಿಲ್ಲ! 

ಟೋನಿ  ನಂಬಲಿಲ್ಲ ಎನ್ನುವುದನ್ನು ಆತನ ಚಹರೆ ಹೇಳುತಿತ್ತು. ಅದನ್ನು ಗಮನಿಸಿದ ಶರ್ಮ,  ನಂಬುವುದು ಬಿಡುವುದು ನಿನಗೆ ಬಿಟ್ಟಿದ್ದು. ಆದರೆ ಇದರ ಇನ್ನೂ ನನಗೆ ಗೊತ್ತಿರುವ ಉಪಯೋಗಗಳನ್ನು ನಿನಗೆ ಹೇಳಬೇಕೆಂಬ ಬಯಕೆ ಬತ್ತಿಹೋಯಿತು! ಎಂದ. 

ಹಾಗೇನಿಲ್ಲ. ನಾನು ಇದನ್ನ ಪರೀಕ್ಷಿಸಿ ನೋಡುತ್ತೇನೆ. ಆದರೆ ಒಬ್ಬ ನಾಟಿ ವೈದ್ಯರಾಗಿ ನಿಮ್ಮ ವೈದ್ಯಕೀಯ ರಹಸ್ಯಗಳನ್ನು ಹೀಗೆ ಗೊತ್ತು ಪರಿಚಯವಿಲ್ಲದವರ ಬಳಿ ಹೇಳುವುದರ ಪ್ರಯೋಜನ? ಎಂದು ಕೇಳಿದ ಟೋನಿ. 

ಶರ್ಮ, ಏನೂ ಹೇಳದೆ ಆ ಗುಂಡಿಯನ್ನು ನೋಡತೊಡಗಿದ!

---

ಇತ್ತ, ರಾಮಣ್ಣನ ಅಡಿಗೆ ತಯಾರಾಯ್ತು. ಟೋನಿ ಇನ್ನೂ ಬಾರದಿರುವುದನ್ನು ಗಮನಿಸಿ ರಾಮಣ್ಣ ಟೋನಿ ಬಿಟ್ಟು ಹೋದ ಕತ್ತಿಯನ್ನು ತೆಗೆದುಕೊಂಡು ಗೋರ್ಕಲ್ಲ ಕಡೆ ಬಿರುಸಾಗಿ ನಡೆಯತೊಡಗಿದ. 

---

ಅಲ್ಲಿನ ಮೌನ ಗಾಳಿಯಲ್ಲೇ ಸಂವಹನ ಮಾಡುತಿತ್ತು! ತುಸು ಹೊತ್ತಿನ ಬಳಿಕ ಶರ್ಮ ಎದ್ದ! 
ಬಾ. ಆ ಬದಿಗೆ ಹೋಗೋಣ!

ಸರಿ. ಎಂದು ಟೋನಿ ಅವರನ್ನು ಹಿಂಬಾಲಿಸಿದ. 

ಅಸ್ಟರಲ್ಲಿ ಹಾವುಗಳು ಎಲ್ಲೋ ಮರೆಯಾಗಿದ್ದವು. ಟೋನಿಯ ಹೂಗಳು ತುಂಬಿದ ಕಂಟೇನರ್ ಅಲ್ಲೇ ಇತ್ತು. 

ಮತ್ತೆ ಕುಳಿತುಕೊಳ್ಳಲು ಹೇಳಿದ ಶರ್ಮ ತಾನೂ ಕುಳಿತ. ಟೋನಿಗೆ ಹಸಿವಾಗಲು ಶುರುವಾಯ್ತು. 

ನೋಡು ನಿನ್ನಿಂದ ನನಗೊಂದು ಉಪಕಾರ ಆಗಬೇಕು. ನಿನಗೆ ರಾಮು ಮಗ ರಾಜು ಗೊತ್ತಲ್ಲ? ಎಂದು ಕೇಳಿದ ಶರ್ಮ. 

ಹಾ. ಲಾಸ್ಟ್ ಟೈಮ್ ಬಂದಾಗ ಆ ಐದು ವರ್ಷದ ಪೋರ ಕೂಡ ನನ್ನ ಜೊತೆ ಗೋರ್ಕಲ್ಲ ಬಳಿ ಬಂದಿದ್ದ. 

ಆ ರಾಜು ಈಗ ಕಣ್ಮರೆಯಾಗಿದ್ದಾನೆ! 

ಏನು? ಹೇಗೆ? ಎಂದು ಕೇಳಿದ ಟೋನಿಯ ಕಣ್ಣಲ್ಲಿ ಕುತೂಹಲಕ್ಕಿಂತ ಕನಿಕರ ಕಾಣುತಿತ್ತು. 

---

ಟೋನಿ ಯಾರು? ಜಗದೀಶ್ ಯಾರು? ಚಂದ್ರು ಯಾರು? ರಾಜು ಹೇಗೆ ಕಣ್ಮರೆಯಾದ? ಶರ್ಮ ಬಯಸಿದ ಉಪಕಾರವೇನು? ಮುಂದಿನ ಸಂಚಿಕೆಯಲ್ಲಿ - "೪. ರಾಜಶೇಕರ".

Wednesday, 11 February 2015

೨ ಹಿಂಗಾರಿನ ಬಂಗಾರದ ಹೂಗಳು

 ತಡವಾಗಿ ಬಂದವರಿಗಾಗಿ - ಟೋನಿ ಗೋರ್ಕಲ್ಲಿಗೆ ಬಂದಿಳಿದಾಗ ಮಧ್ಯರಾತ್ರಿ. ರಾತ್ರಿಯನ್ನು ಗೆಸ್ಟ್ ಹೌಸ್ನಲ್ಲಿ ಕಳೆದು ಬೆಳಗ್ಗೆ ಸುಮಾರು ಹತ್ತು ಗಂಟೆಗೆ ಗೋರ್ಕಲ್ಲ ಕಡೆ ಒಂಟಿಯಾಗಿ ಹೊರಡುತ್ತಾನೆ ಟೋನಿ.

--- ೨. ಹಿಂಗಾರಿನ ಬಂಗಾರದ ಹೂಗಳು

ಟೋನಿ ಗೋರ್ಕಲ್ಲ ಬಳಿ ತಲುಪಿದಾಗ ಕೈ ಗಡಿಯಾರ ಹನ್ನೊಂದು ಗಂಟೆ ತೋರಿಸುತ್ತಿತ್ತು .
ಸೂರ್ಯ ನೆತ್ತಿಯ ಮೇಲೆ ಬರಲು ಹವಣಿಸುತ್ತಿತ್ತು. ಆಗಸದಲ್ಲಿ ತೇಲುವ ಮೋಡಗಳು ನೆರಳನ್ನು ಭೂಮಿಗೆ ನೀಡಿ ವಂದಿಸುತ್ತಿವೆಯೋ ಎನ್ನುವಂತಿತ್ತು. ಯಾಕೋ ಏನೋ, ಗಾಳಿ ಮಾತ್ರ ಸುಸ್ತಾಗಿ ಅಲುಗಾಡದೇ ಎಲ್ಲೋ ಮಲಗಿದ್ದಂತ್ತಿತ್ತು. ಸುತ್ತಲೂ ಭಯಂಕರವಾಗಿ ಬೆಳೆದ ಮರಗಳು, ಗಿಡಗಂಟಿಗಳು, ಮಟ್ಟಿಗಳು, ತನಗಾಗಿ ಮಾಡಿದಂತಿರುವ ಕಾಲು ದಾರಿ.

ಎದುರಿಗೆ ಅಚಲವಾಗಿ ನಿಂತ ಗೋರ್ಕಲ್ಲು. ಪ್ರಕೃತಿಯ ಕೃತಿಯೇ ವಿಚಿತ್ರ. ವಿಸ್ಮಯ. ಸುಮಾರು ಮುನ್ನೂರು ಅಡಿ ಸುತ್ತಳತೆಯ, ಇನ್ನೂರು ಅಡಿ ಎತ್ತರದ ಗೋರ್ಕಲ್ಲು, ಆ ಅರಣ್ಯದ ನಡುವೆ ಒಬ್ಬಂಟಿಯಾಗಿ, ಮೌನವಾಗಿ ಕಲ್ಲಾಗಿ ನಿಂತಿತ್ತು. ಅದರ ಮಡಿಲಲ್ಲಿ ಅರಳಿದ ಬಂಗಾರದ ವರ್ಣದ ಹೂಗಳು.

ಏನಾಶ್ಚರ್ಯ! ಹುಡುಕಿದರೂ ಕಾಣದ ಚಿಟ್ಟೆಗಳು, ದುಂಬಿಗಳು. ಕಪ್ಪು ಕಲ್ಲಿನ ಕೆಳಗೆ ಆವರಿಸಿದ ಬಂಗಾರ ವರ್ಣದ ಹೂಗಳು, ಅದರ ಕೆಳಗೆ ಹಸಿರು ತುಂಬಿದ ಒಂದು ಅಡಿ ಎತ್ತರದ ಗಿಡಗಳು, ಅದರ ಕೆಳಗೆ, ಗೋರ್ಕಲ್ಲಿನಂತೆ ಕಪ್ಪಾದ ತೇವವಾದ ನೆಲ.

ಹಿಂದಿನಸಲ ಬಂದಾಗ ಒಂದೇ ಒಂದು ಹೂ ಬಿಟ್ಟಿರಲಿಲ್ಲ. ಆಗ ತಾನು ಬಂದಿರುವುದು ಈ ಹೂಗಳ ಸಲುವಾಗಿ ಅಲ್ಲವಲ್ಲ, ಎಂದುಕೊಂಡ ಟೋನಿ.

ಹೂಗಳನ್ನು ನೋಡಿದಾಗ, ಐದು ಕಿಲೋಮೀಟರು ಬಿರುಸಾಗಿ ನಡೆದ ಆಯಾಸ ಕಣ್ಮರೆಯಾಗಿತ್ತು. ಮಾಸ್ಕ ತೆಗೆದು, ಬ್ಯಾಗಿನಿಂದ ಕ್ಯಾಮೆರಾ ತೆಗೆದು ಫೋಟೋ ಕ್ಲಿಕ್ಕ್ಕಿಸಿದ ಮೇಲೆ, ಕೈಗೆ ಗ್ಲೌಸ್ ಹಾಕಿಕೊಂಡ ಟೋನಿ. ಅದಕ್ಕಾಗಿಯೇ ತಂದ ಗ್ಲಾಸಿನ ಕಂಟೇನರ್ನಲ್ಲಿ ಒಂದೊಂದೇ ಹೂಗಳನ್ನು ಇನ್ನಿಲ್ಲದ ತಾಳ್ಮೆಯಿಂದ ತುಂಬತೊಡಗಿದ ಟೋನಿ.

---

'ಅರೆ?! ಆ ಯಪ್ಪ ಕತ್ತಿ ಬುಟ್ಬುಟ್ಟು ಹ್ವೋಗೈತೆ!' ಎನ್ನುತ್ತಾ ರಾಮಣ್ಣ ಅಲ್ಲಿದ್ದ ಕತ್ತಿ ತೆಗೆದುಕೊಂಡ. ಕೆಲವು ಕ್ಷಣ ಆವನ ಮೆದುಳು ಬ್ಲಾಂಕ್ ಆಗಿತ್ತು. ಕಾಡು ಪ್ರಾಣಿಗಳು ಗೋರ್ಕಲ್ಲ ಬಳಿ ಸುಳಿಯಲ್ಲ ಎಂದು ರಾಮಣ್ಣನಿಗೆ ಗೊತ್ತಿತ್ತು. ಆದರೂ ಸಹಾಯಕ್ಕೆ ಬರುತ್ತೆ ಎಂದು ಹರಿತ ಮಾಡಿದ್ದ ಕತ್ತಿ ಕೊಟ್ಟಿದ್ದ. ಈವಾಗ ಕೊಟ್ಟು ಬರೋದೋ, ಬ್ಯಾಡವೋ?
ಐದು ಕಿಲೋಮೀಟರ್ ಹೋಗೋದರೊಳಗೆ ಆ ಯಪ್ಪಾ ಅಲ್ಲಿಂದ ಹೊರಟುಬಿಡ್ತಾರೆ. ಅಡಿಗೆ ಬೇರೆ ಮಾಡ್ಬೇಕು, ಎಂದು ಕತ್ತಿಯನ್ನು ಪಕ್ಕಕ್ಕೆ ಇಟ್ಟ ರಾಮಣ್ಣ, ತನ್ನ ಕೆಲಸದಲ್ಲಿ ಮಗ್ನನಾದ.

---

ಒಂದೊಂದು ಹೂಗಳು ಬಂಗಾರದ ಲೇಪನದಂತೆ ಕಂಗೊಳಿಸುತ್ತಿತ್ತು. ನಾಲಕ್ಕು ದಳಗಳು, ಅಂಚಿನಲ್ಲಿ ಕಂದು ಬಣ್ಣ ತಾಗಿಸಿದಂತಿತ್ತು.  ಚಂದ್ರು, ಹೂವಿನ ಫೋಟೋ ತೋರಿಸಿದಾಗ ಒಮ್ಮೆಯಾದರು ನೈಜವಾದ ಹೂವನ್ನು ನೋಡಬೇಕು ಅನಿಸಿತ್ತು. ಈಗ ಅವುಗಳ ನಡುವೆಯೇ ತಾನಿದ್ದೇನೆ!

ಒಂದೊಂದು ಹೂಗಳನ್ನು ಹೇಗೆ ಕೊಯ್ಯಬೇಕು, ಹೇಗೆ ಗ್ಲಾಸಿನಲ್ಲಿ ತುಂಬಬೇಕು ಎನ್ನುವುದನ್ನು ಚಂದ್ರು ಮತ್ತೆ ಮತ್ತೆ ಹೇಳಿದ್ದು ನೆನಪಾಯಿತು. ಹೂಗಳು ಗ್ಲಾಸಿನಲ್ಲಿ ಜಾಗ ಪಡೆದಂತೆ ಟೋನಿಯ ಹೃದಯದಲ್ಲೂ ಜಾಗ ಪಡೆದವು. ಗ್ಲಾಸ್ ಪೂರ್ತಿಯಾಗುವಸ್ಟರಲ್ಲಿ ಟೋನಿ, ಇಷ್ಟು ಚಂದದ ಹೂಗಳನ್ನು ಗಿಡದಿಂದ ಬೇರ್ಪಡಿಸಿದ್ದಕ್ಕಾಗಿ ನೊಂದ.

ಪಕ್ಕದಲ್ಲಿ ಸರಸರನೆ ಏನೋ ಶಬ್ದವಾಯಿತು. ಟೋನಿ ಬೆಚ್ಚಿದ!
ಹಾವು!
ಟೋನಿ ಮತ್ತೂ ಬೆಚ್ಚಿದ!
ಎರಡು ಹಾವು!

ಎರಡು ಕಪ್ಪು ಬಂಗಾರ ಮಿಶ್ರಿತ ಪಟ್ಟೆಗಳುಳ್ಳ ಹಾವುಗಳು! ಸುಂದರವಾದ, ಅಸ್ಟೇ ಭಯಂಕರವಾದ ಕಾಳಿಂಗ ಸರ್ಪಗಳು! ಒಂದು ಹೆಜ್ಜೆ ಹಿಂದಕಿಟ್ಟ ಟೋನಿಯನ್ನು ಹಿಂದಿನಿಂದ ಯಾರೋ ತಡೆದರು.

ಆ ಕ್ಷಣ ಟೋನಿಯ ಉಸಿರು ನಿಂತಿತ್ತು!

ಆ ವ್ಯಕ್ತಿ, ತೋರು ಬೆರಳನ್ನು ತನ್ನ ಬಾಯಿಗಿಟ್ಟು ಸುಮ್ಮನಿರಲು ಸಂಜ್ಞೆ ಮಾಡಿದಾಗ, ಉಸಿರಾಡಿದ ಟೋನಿ. ಉಸಿರಾಟ ನಾರ್ಮಲ್ ಆಗೋ ಅಸ್ಟರಲ್ಲಿ ಆ ಸರ್ಪಗಳು ಕದಲುತ್ತ ದೂರ ಹೋದವು.

'ನೀವು ಯಾರು?', ನಿಷ್ಶಬ್ದವನ್ನು ಮುರಿದ ಟೋನಿ.
ಆ ವ್ಯಕ್ತಿ   ಹೇಳುತ್ತೇನೆ ಎಂದು ಸೂಚಿಸುತ್ತ ಸುಮ್ಮನಿರಲು ಹೇಳಿದ.

---

ತಲೆಯಲ್ಲಿ ನೀಟಾಗಿ ಬಾಚಿದ ಆಲ್ಮೋಸ್ಟ್ ಬಿಳಿಯಾದ ಕೂದಲು. ಅಗಲವಾದ ಹಣೆ. ಹಣೆಯ ಮದ್ಯ ಬಾಗದಲ್ಲಿ, ಸ್ವಲ್ಪ ಕೆಳಗಡೆ ಚಂದನ ಮಿಶ್ರಿತ ಗಂಧ. ತೀಕ್ಷ್ಣವಾದ ಕಣ್ಣುಗಳು. ಕಣ್ಣುಗಳ ನಡುವೆ ಜೋಡಿಸಿಟ್ಟ ಹಾಗೆ ಇರುವ ನೀಟಾದ ಮೂಗು. ಮೂಗಿನ
ಕೆಳಗೆ ಬಿಲ್ಲಿನ ಆಕಾರದಲ್ಲಿರುವ, ಬಿಳಿಯಾದ ಪೊದೆ ಮೀಸೆ. ಬಿಳಿ ವಸ್ತ್ರ ದರಿಸಿದ, ಆರು ಅಡಿ ಎತ್ತರದ, ಸುಮಾರು ೫೦ ರಿಂದ ೬೦ ವಯಸ್ಸಿನ ವ್ಯಕ್ತಿ.

ನೋಡಿದ ಕೂಡಲೇ ಪೂಜ್ಯ ಭಾವನೆ ತರುವಂತ  ವ್ಯಕ್ತಿಯನ್ನು ನೋಡುತ್ತಲೇ ಇದ್ದ ಟೋನಿ.

ಹಾವುಗಳು  ಸಂಪೂರ್ಣ ದೂರವಾದವೆಂದು ಖಚಿತಗೊಂಡಾಗ ಆ ವ್ಯಕ್ತಿ ಬಾಯ್ತೆರೆದ.

'ಶರ್ಮ, ಶರ್ಮ ಎಂದು ನನ್ನ ಹೆಸರು. ನೀವು?'

'ನಾನು ಜಗದೀಶ್. ಬೆಂಗಳೂರಿಂದ ಬಂದಿದ್ದೇನೆ. ಇದೋ. ಈ ಹೂಗಳನ್ನು ತೆಗೆದುಕೊಂಡು ಹೋಗಕ್ಕಾಗಿ!', ಎಂದು ಹೂಗಳತ್ತ ಕೈ ತೋರಿಸಿದ ಟೋನಿ.

---

ಟೋನಿ ಯಾರು? ಜಗದೀಶ್ ಯಾರು? ಈ ಶರ್ಮ ಯಾರು? ಆ ಚಂದ್ರು ಯಾರು? ಏನಿದು ಹೂಗಳ ಮಹತ್ವ? ರಾಜು ಯಾಕೆ ಈ ಬಾರಿ ಬರಲಿಲ್ಲ? ಮುಂದಿನ ಸಂಚಿಕೆಯಲ್ಲಿ - "೩. ಬಂಗಾರದ ಹೂಗಳ ಮರ್ಮ".






Sunday, 8 February 2015

೧. ಗೋರ್ಕಲ್ಲಿಗೆ ಪಯಣ

ಮುನ್ನುಡಿ - ಮತ್ತೆ ಬಂತು ಮರುದಿನ - ಎಸ್ಟೋ ಹೊತ್ತಿಗೆಗಳನ್ನು ಓದಿದ ನಂತರ ತಾನೂ ಇಂಥದ್ದೊಂದನ್ನು ಬರೆಯಬೇಕೆಂಬ ಆಸೆ ಚಿಗುರಿತ್ತು. ಅದು ಬೆಳೆದು ಮರವಾದಾಗ, ಬರೆಯೋದಿರಲಿ ಓದಲಿಕ್ಕೆ ಕೂಡ ಸರಿಯಾಗಿ ಟೈಮ್ ಸಿಗುತ್ತಿರಲಿಲ್ಲ. ಆದರೂ ಒಂದು ಹೆಜ್ಜೆ ಹಿಂದೆಯಿಟ್ಟು, ಸ್ವಲ್ಪ ಸಮಯ ಮಾಡಿಕೊಂಡು ಬರೆಯುವ ಪ್ರಯತ್ನ ಮಾಡಿದೆ. ಅದರ ಮೊದಲ ಮೆಟ್ಟಿಲು ಇದು.  ಇದರಲ್ಲಿ ನಾನು ಓದಿದ ಹಲವಾರು ಲೇಖಕರ ಶೈಲಿಯನ್ನು ನೀವು ಗಮನಿಸಬಹುದು. ಕಥೆಯ ಹಂದರ - ಓರ್ವನ ನಾಳೆಯನ್ನು ಕಾಣುವ ಹಂಬಲ. ಮತ್ತು ಇಂದಿನ ಯುದ್ಧ. ನುರಿತ ಲೇಖಕ ಅಲ್ಲವಾದುದರಿಂದ, ಅಲ್ಲಲ್ಲಿ ಲೇಖನ ಕಳಪೆಯಾಗುವ ಸಾಧ್ಯತೆ ಇದೆ. ಆದರೆ ಎಲ್ಲೂ ಕೃತಿ ಚೌರ್ಯ ಮಾಡುವುದಿಲ್ಲ. ಏಕೆಂದರೆ ಈ ಕಥೆಗಾಗಿ ನನ್ನ ಅಮೂಲ್ಯ ಸಮಯವನ್ನು ಮೀಸಲಿಟ್ಟಿರುವೆ.  ಇದೊಂದು ಕಾಲ್ಪನಿಕ ಕಥೆ. ಎಲ್ಲಾದರೂ, ಯಾರಿಗಾದರೂ, ಹೇಗಾದರೂ ಲಿಂಕ್ ಆಗಿದ್ದರೆ - ಅದು ೧೦೦% ಕಾಕತಾಳಿಯ...

--- ೧. ಗೋರ್ಕಲ್ಲಿಗೆ ಪಯಣ

ಟೋನಿ ನೀರು ಕುಡಿದು ಬಾಯಿ ಒರೆಸಿಕೊಂಡ.
'ಅಬ್ಬ' ಹೋದ ಜೀವ ವಾಪಾಸ್ ಬಂದ ಹಾಗಾಯಿತು.
ತುಂಬಾ ಥ್ಯಾಂಕ್ಸ್ ಎಂದು ಹೇಳಿ ಟೈಮ್ ನೋಡಿಕೊಂಡ ಟೋನಿ.
ರಾತ್ರಿ 9:30.

ಅಂದರೆ, ಇನ್ನೂ ಎರಡು ತಾಸು ಪ್ರಯಾಣ ಮುಂದುವರೆಸಲೇಬೇಕು.

ಮೊಬೈಲ್ ನಲ್ಲಿ ಬ್ಯಾಟರಿ ಕ್ಷೀಣಿಸಿತ್ತು. ಸ್ವಿಚ್ ಆಫ್ ಮಾಡಿದರೆ ಎಲ್ಲಿ ಮತ್ತೆ ಆನ್ ಆಗುವುದಿಲ್ಲವೋ ಎಂಬ ಭಯ.
ಯಾರಾದರೂ ಕಾಲ್ ಮಾಡಿದರೆ, ರಿಂಗ್ ಆಗಿ ಉಳಿದ ಬ್ಯಾಟರೀನು ಕಾಲಿ ಆಗುತ್ತೆ ಎಂದು ಸೈಲೆಂಟ್ ಮೋಡಿಗೆ ಹಾಕಿದ ಟೋನಿ.

ಛೆ!, ಬಸ್ಸು ಹೊರಟಾಗ ಅಸ್ಟೆಲ್ಲಾ ಗೇಮ್ ಆಡಬಾರದಿತ್ತು ಎಂದುಕೊಂಡ ಟೋನಿ.

---

12:00 ಗಂಟೆ. ಮಧ್ಯ ರಾತ್ರಿಗೆ 'ಗೋರ್ಕಲ್ಲು' ಇಳಿಯೋರು ಬನ್ನಿ, ಎಂದು ನೀರು ಕೊಟ್ಟ ಪುಣ್ಯಾತ್ಮ ಕಂಡಕ್ಟರ್ ಕರೆದಾಗ, ನಿದ್ರೆಯಿಂದ ಎದ್ದ ಟೋನಿ, ಲಗೇಜ್ ಸಮೇತ, ಬಸ್ಸಿನ ಬಾರವನ್ನು ಇಳಿಸಿದ.

ಸುತ್ತಲೂ ಕತ್ತಲು ಆವರಿಸಿದ್ದರೂ, ಹುಣ್ಣಿಮೆಯ ಚಂದ್ರ ಮೋಡಗಳ ನಡುವೆ ಆಗಾಗ್ಗ ಇಣುಕುತ್ತಿದ್ದ.
ಟಾರ್ಚ್ ಆನ್ ಮಾಡಿ ಮಣ್ಣು ರಸ್ತೆಯಲ್ಲಿ ಒಬ್ಬನೇ ನಡೆಯತೊಡಗಿದ ಟೋನಿ.

ಮೊದಲ ಸಲವೋ ಎಂಬಂತೆ, ತನ್ನ ಚಪ್ಪಲಿಯ ಶಬ್ದವೇ ಕರ್ಕಶವಾಗಿ ಕೇಳುತ್ತಿದೆ!

ಇನ್ನೆರಡು ಮಾರು ದೂರ ಕ್ರಯಿಸಿದರೆ, ಗೆಸ್ಟ್ ಹೌಸ್ ಸಿಗುತ್ತದೆ!

ಕೊರೆಯುವ ಚಳಿ! ಪ್ರಕೃತಿಯ ಸುಳಿ! ಅದರಲ್ಲಿ ಒಂದು ಕೈಯಲ್ಲಿ ಟಾರ್ಚ್, ಇನ್ನೊಂದರಲ್ಲಿ ಜೀವ ಹಿಡಿದುಕೊಂಡು ಮುಂದೆ ಸಾಗಿದ ಟೋನಿ.

---

ಗೆಸ್ಟ್ ಹೌಸ್ ಮುಂದೆ, ತನ್ನ ಬರುವಿಗೆ ಕಾಯುತ್ತಿದ್ದ ಗುಮಾಸ್ತ ರಾಮಣ್ಣ ಲಾಟೀನು ದೊಡ್ಡ ಮಾಡುವುದು ಕಾಣಿಸಿತು.

'ಸ್ವಾಮಿ. ರಾತ್ರಿ ಇಲ್ಲಿ ಕರೆಂಟ್ ಇರೋದಿಲ್ಲ, ನಿಮ್ಮ ರೂಮಲ್ಲೂ ಲಾಟೀನ್ ಹಚ್ಚೋವ್ನಿ, ನೀವು ಬಟ್ಟೆ ಬದಲಾಯಿಸಿ. ಅಸ್ಟರಲ್ಲಿ ನಾನು ಬಿಸಿ ಚಹಾ ಮಾಡ್ಕೊಂಡು ಬರ್ತೀನಿ..

ಚಹಾ ಜೊತೆಗೆ ಏನಾದ್ರು ಸಿಗುತ್ತಾ ರಾಮಣ್ಣ?

ಹು ಸ್ವಾಮಿ, ನೀವು ಸರಿ ಅಂದ್ರೆ, ಇನ್ನರ್ದ ಗಂಟೇಲಿ ಅಡುಗೆ ತರ್ಸ್ತೇನಿ.

ನೀನು ಊಟ ಮಾಡಿದ್ಯ ರಾಮಣ್ಣ?

ಇವತ್ತು ಹುಣ್ಣಿಮೆ ನೋಡಿ ಸ್ವಾಮಿ , ಉಪ್ವಾಸ ಮಾಡನ ಅಂತ.

ಅಲ್ಲಾ ರಾಮಣ್ಣ! ಎಲ್ಲರೂ ಏಕಾದಶಿಗೆ ಉಪವಾಸ ಮಾಡಿದರೆ ನೀನು? ಇರ್ಲಿ ಬಿಡು, ಚಹಾ ಸ್ವಲ್ಪ ಜಾಸ್ತಿ ಮಾಡು ಬಿಸ್ಕೆಟ್ ಇದೆ ಸಾಕು.

ಸರಿ ಸ್ವಾಮೀ.

---

ಗೋರ್ಕಲ್ಲಿಗೆ, ಟೋನಿ ಹೋಗ್ತಾ ಇರೋದು, ಇದೂ ಸೇರಿ ಮೂರನೆ ಸರ್ತಿ. ಎರಡನೇ ಸಲ ಬಂದಾಗ ರಾಮಣ್ಣ ಉಪ್ಪಿಟ್ಟು ಮಾಡಿದ್ದು ನೆನಪಾಯ್ತು.

ಟೀ ಕುಡಿದು ಬಿಸ್ಕೆಟ್ ತಿಂದ ಮೇಲೆ ಒಂದು ತರ ಹಿತವೆನಿಸಿತು.

ರಾಮಣ್ಣ, ನೀನು ಮಲ್ಕೋ ಹೋಗು. ನಾನು ಸ್ವಲ್ಪ ಪುಸ್ತಕ ಓದಬೇಕು.

ಆಗ್ಲಿ ಸ್ವಾಮಿ, ಮಲಗಬೇಕಾದರೆ ಲಾಟೀನು ಸಣ್ಣ ಮಾಡ್ಬುಡಿ. ನೀರು ಇಟ್ಟೀನಿ, ಏನಾದ್ರೂ ಬೇಕಾದ್ರೆ ಎಬ್ಬುಸ್ರಿ.

ಸರಿ ರಾಮಣ್ಣ. ಗುಡ್ ನೈಟ್.

ರಾಮಣ್ಣನಿಗೆ ಗುಡ್ ನೈಟ್ ಮೀನಿಂಗ್ ಗೊತ್ತಿದೆಯೋ ಇಲ್ವೋ? ಎಂಬ ವಿಚಿತ್ರ ಸಂಶಯ ಟೋನಿಯ ತಲೆಯಲಿ ಸುಳಿಯಿತು. ಏನು ತಿಳಿದುಕೊಂಡನೋ, ಅಥವಾ ಗೊತ್ತಿರಲೂಬಹುದು.

ಬುಕ್ ತೆಗೆದು ಲಾಟೀನು ದೀಪದಲ್ಲಿ ಓದುವಾಗ, ಪ್ರಯಾಣದ ಆಯಾಸ ಕಣ್ಣಲ್ಲಿ ಕಾಣಿಸತೊಡಗಿತು.
ಹದಿನೈದು ಪೇಜ್ ತಿರಿಗಿಸೋದರಲ್ಲಿ ನಿದ್ದೆ ಆವರಿಸಿ, ಹಾಗೆ ಕಣ್ಣು ಮುಚ್ಚಿ, ಇನ್ನೇನು ಲಾಟೀನಿಗೆ ತಲೆ ತಾಗುತ್ತೆ ಅನ್ನುವಾಗ ದಡಕ್ಕನೆ ಎದ್ದ ಟೋನಿ.

ಬಿಚ್ಚಿಟ್ಟ ವಾಚ್, ಟೋನಿ ನೋಡದಿದ್ದರೂ ೨ ಗಂಟೆ ತೋರಿಸುತ್ತಿತ್ತು. ಮಲಗಿದ ಟೋನಿ.

---

ಕಿಟಕಿಯಿಂದ ತಣ್ಣನೆ ಗಾಳಿಯ ಜೊತೆಗೆ ಬೆಳಕೂ ಸಹ ಬಂದು ಟೋನಿ ಕಣ್ಣು ತೆರೆದಾಗ ೯ ಗಂಟೆ.  ಮೊದಲು ಮಾಡಿದ ಕೆಲಸ ಎಂದರೆ ಮೊಬೈಲನ್ನು ಚಾರ್ಜಿಗೆ ಹಾಕೋದು. ಸ್ನಾನ ಮಾಡಿ ರಾಮಣ್ಣ ತಂದುಕೊಟ್ಟ ಇಡ್ಲಿಯನ್ನು ತಿಂದ ಮೇಲೆ ಬಂದ ಕಾರ್ಯಕ್ಕೆ ರೆಡಿ ಆದ ಟೋನಿ.

ರಾಮಣ್ಣ, ಈಗ ಹತ್ತು ಗಂಟೆ, ನಾನು ಸರಿಯಾಗಿ ಎರಡು ಗಂಟೆಗೆ ಇಲ್ಲಿಗೆ ಬರ್ತೀನಿ, ಸಾರಿಗೆ ಸ್ವಲ್ಪ ಕಡಿಮೆ ಉಪ್ಪು ಹಾಕು.

ಸರಿ ಸ್ವಾಮಿ. ತಡ ಆದ್ರೆ, ನಾನೇ ಊಟ ತರ್ತೀನಿ.

ಅದೇನು ಬೇಡ ರಾಮಣ್ಣ. ನಾನು ಬರ್ತೀನಿ, ಆದ್ರೆ ಒಂದು ಅರ್ದ ಗಂಟೆ ಆಚೀಚೆ ಆಗಬಹುದು ಅಸ್ಟೆ.

ಸರಿ ಸ್ವಾಮಿ, ನಿಮ್ಮಿಸ್ಟದಾಗೆ ಆಗ್ಲಿ.

ಟೋನಿ ಕಾಡಿನ ಮರಗಳ ನಡುವೆ ಮರೆಯಾಗುವ ಮುನ್ನ ರಾಮಣ್ಣ ಕೊಟ್ಟ ಕತ್ತಿಯನ್ನು ಮರೆತುಹೋದ.

---

ಗೋರ್ಕಲ್ಲಿಗೆ ಹೆಸರು ಬಂದಿದ್ದು ಬಹುಶ ಆ ಅರಣ್ಯದ ನಡುವೆ ಇರುವ ಒಂಟಿ ಕಲ್ಲಿನ ಬೆಟ್ಟದಿಂದ, ಎಂದು ರಾಮಣ್ಣ ಮೊದಲ ಸಾರಿ ಬಂದಾಗ ಹೇಳಿದ್ದ. ಟೋನಿ ಉಳಿದಿರುವ ಗವರ್ನಮೆಂಟ್ ಗೆಸ್ಟ್ ಹೌಸ್ ಸಮೀಪ ೧೦-೧೫ ಮನೆಗಳಿವೆ.
ಲಾಸ್ಟ್ ಟೈಮ್ ಬಂದಾಗ ರಾಮಣ್ಣನ ಮಗ ರಾಜು ತನ್ನ ಜೊತೆ ಗೋರ್ಕಲ್ಲ ಸಮೀಪ ಬಂದಿದ್ದು ನೆನಪಾಯಿತು.

ಅರೆ! ರಾಮಣ್ಣ ನ ಬಳಿ ಕೇಳೋದು ಮರೆತುಬಿಟ್ಟೆ! ಬ್ಯಾಗ್ನಲ್ಲಿರೋ ಚಾಕೋಲೇಟ್ ಕೊಡಬೇಕಿತ್ತು.

ಗೆಸ್ಟ್ ಹೌಸಿನಿಂದ ನೈಋತ್ಯ ದಿಕ್ಕಿನಲ್ಲಿ ಐದು ಕಿಲೋಮೀಟರ್ ನಡೆದರೆ ಸಿಗುವುದೇ ಗೋರ್ಕಲ್ಲ ಬೆಟ್ಟ.

ಗೋರ್ಕಲ್ಲ ಬೆಟ್ಟದ ಸಮೀಪ ಚಿತ್ರ ವಿಚಿತ್ರವಾದ ಔಷದೀಯ ಗುಣಗಳುಳ್ಳ ಸಸ್ಯಗಳು ಕಾಲ ಕಾಲಕ್ಕೆ ಹುಟ್ಟುತಿದ್ದವು. ಆದನ್ನು ಅರಿತ ಸರ್ಕಾರ ಅಲ್ಲಿ ಅಧ್ಯಯನಕ್ಕೆಂದು ಒಂದು ಗೆಸ್ಟ್ ಹೌಸ್ ಕಟ್ಟಿತು. ಅದೇ ಕಾರ್ಯ ನಿಮಿತ್ತ ಆ ಊರಿಗೆ ಮೂರನೇ ಬಾರಿ ಬಂದಿದ್ದ ಟೋನಿ.

ಆ ಬೆಟ್ಟದ ಬದಿಯಲ್ಲಿ ಮಳೆಗಾಲ ನಿಂತಾಗ ಬಿಡೋ ಹೂಗಳಿಗಾಗಿ, ಈ ಭಯಂಕರ ಕಾಡಿನಲ್ಲಿ ಒಂಟಿಯಾಗಿ ನಡೆಯೋದು ಒಂದು ತರ ಹೆಮ್ಮೆಯನಿಸಿತು ಟೋನಿಗೆ.

ಹುಲಿಗಳು, ಕಾಡು ಪ್ರಾಣಿಗಳು, ಸಾಮಾನ್ಯವಾಗಿ ಈ ಬೆಟ್ಟದ ಬಳಿ, ಸುಮಾರು ೪ ಕಿಲೋಮೀಟರ್ ರೇಡಿಯಸ್ ಒಳಗೆ ಬರುತ್ತಿರಲಿಲ್ಲ ಎಂದು ಟೋನಿಗೆ ಖಚಿತ ಮಾಹಿತಿ ಇತ್ತು. ಅದಕ್ಕೆ ಕಾರಣ ಅಲ್ಲಿ ಬೆಳೆಯುವ ಇನ್ನೊಂದು ಬಗೆಯ ಗಿಡಗಳು. ಮೂಗನ್ನು ಕೊರೆಯುವ ವಾಸನೆಯನ್ನು ಬೀರುವ ಈ ಗಿಡಗಳ ಮದ್ಯ ಟೋನಿ ಮಾಸ್ಕ ಹಾಕಿಕೊಂಡು ಹೆಜ್ಜೆ ಹಾಕುತ್ತಿದ್ದ.

---

ಟೋನಿ ಯಾರು? ರಾಜು ಯಾಕೆ ಈ ಬಾರಿ ಬರಲಿಲ್ಲ? ಟೋನಿ ಕತ್ತಿಯನ್ನು ಮರೆತುಹೋಗಿದ್ದು ರಾಮಣ್ಣನಿಗೆ ಗೊತ್ತಾಯಿತೆ? ಮುಂದಿನ ಸಂಚಿಕೆಯಲ್ಲಿ  - "೨. ಹಿಂಗಾರಿನ ಬಂಗಾರದ ಹೂಗಳು"